ಇಬ್ನ್ ಖಾಲ್ದೂನ್
	1332-1406 ಅರಬ್ ಇತಿಹಾಸಕಾರ, ಕಿತಾಬ್ ಅಲ್ ಇಬರ್ (ವಿಶ್ವದ ಇತಿಹಾಸ) ಎಂಬ ಗ್ರಂಥದಲ್ಲಿ ಈತ ಇತಿಹಾಸವನ್ನು ವಿಜ್ಞಾನವೆಂದು ಪರಿಗಣಿಸಿದ್ದಾನೆ: ಇತಿಹಾಸದ ದರ್ಶನವನ್ನು ವಿವರಿಸಿದ್ದಾನೆ. ಚಾರಿತ್ರಿಕ ಘಟನೆಗಳೂ ಅವುಗಳ ಅರ್ಥ, ಸತ್ಯ, ಸಾಮ್ಯ, ವೈಷಮ್ಯ, ವೈವಿಧ್ಯ, ಪ್ರಭಾವಗಳೇ ಮುಂತಾದವುಗಳೂ ಆ ಕೃತಿಯ ಪೀಠಿಕಾ ಪ್ರಕಾರಣದಲ್ಲಿ ವಿಶದವಾಗಿಯೂ ಪ್ರೌಢವಾಗಿಯೂ ಚರ್ಚಿಸಲ್ಪಟ್ಟಿವೆ. ಮಾನವ ಜೀವನದ ಆಶೋತ್ತರಗಳು, ಸಮಾಜದ ಉಗಮ ವಿಕಾಸ ವಿನಾಶಗಳು-ಮುಂತಾದವುಗಳ ಕೂಲಂಕಷ ವಿವೇಚನೆ ಮಾಡಿರುವ ಈ ಗ್ರಂಥದಲ್ಲಿ ಮಾನವನ ಮೇಲೆ ನಾಗರಿಕತೆಯ ಪರಿಣಾಮದ ವೈಜ್ಞಾನಿಕ ಪರಿಶೀಲನೆಯಿದೆ.

	ಸರ್ಕಾರಗಳ ರೀತಿನೀತಿಗಳಿಗನುಸಾರವಾಗಿ ಖಾಲ್ದೂನ್ ರಾಜ್ಯಗಳನ್ನು ಮೂರು ವಿಧವಾಗಿ ವಿಂಗಡಿಸಿದ್ದಾನೆ. ಪ್ರಜೆಗಳ ಇಹ ಪರ ಮೇಲ್ಮೆಗೆ ಶ್ರಮಿಸುವ ಸರ್ಕಾರ ಹೊಂದಿರುವ ರಾಷ್ಟ್ರಗಳದು ಮೊದಲನೆಯ ಗುಂಪು. ಪ್ರಜೆಗಳ ಇಹಲೋಕದ ಕಲ್ಯಾಣಕ್ಕಾಗಿ ಮಾತ್ರ ಕಾರ್ಯೋನ್ಮುಖವಾಗಿರುವ ಸರ್ಕಾರಗಳನ್ನುಳ್ಳ ರಾಷ್ಟ್ರಗಳದು ಎರಡನೆಯ ಗುಂಪು. ರಾಜನ ಹಿತವನ್ನೇ ಮುಖ್ಯ ಗುರಿಯನ್ನಾಗಿಟ್ಟುಕೊಂಡಿರುವ ಸರ್ಕಾರಗಳಿರುವ ರಾಷ್ಟ್ರಗಳು ಕೊನೆಯ ದರ್ಜೆಗೆ ಸೇರಿದವು. ಮೊದಲನೆಯ ಎರಡು ವರ್ಗದ ಸರ್ಕಾರಗಳು ದೈವಿಕ ಭಾವನೆ ಹಾಗೂ ಮಾರ್ಗಗಳ ಪ್ರೇರಣೆಗೆ ಮನ್ನಣೆ ನೀಡುತ್ತವೆ; ಆದರೆ ಕೊನೆಯ ವರ್ಗದ ರಾಜ್ಯಗಳು ಮಾನವನ ಬೌದ್ಧಿಕ ವಾದಸರಣಿಗೆ ಹೆಚ್ಚು ಮನ್ನಣೆ ನೀಡುತ್ತವೆ ಎಂಬುದು ಖಾಲ್ದೂನನ ಅಭಿಪ್ರಾಯ.

ಸಂಸ್ಕøತಿ ವಿಶ್ವ ವ್ಯಾಪಿ. ಅದು ಒಂದು ದೇಶಕ್ಕಾಗಲಿ ಒಂದು ಜನಾಂಗಕ್ಕಾಗಲಿ ಸೀಮಿತವಾದದ್ದಲ್ಲ ಎಂಬ ಸತ್ಯವನ್ನು ಮೊಟ್ಟಮೊದಲಿಗೆ ಮನಗಂಡ ಇತಿಹಾಸಕರಾನೇ ಇಬ್ನ್ ಖಾಲ್ಬೂನ್. ಇವನು ವಿಜ್ಞಾನವನ್ನು ತಾತ್ತ್ವಿಕ, ಪ್ರಾಯೋಗಿಕ ಮತ್ತು ಉತ್ಪಾದಕ ಎಂಬುದಾಗಿ ಮೂರು ಭಾಗಗಳಾಗಿ ವಿಂಗಡಿಸಿದ್ದಾನೆ. ಸಂಸ್ಕøತಿ ಇವೆಲ್ಲವುಗಳ ಸಮ್ಮಿಳನ. ಅದು ಜಡವಲ್ಲ. ವಿಕಾಸವೂ ಪ್ರಗತಿಯೂ ಸಂಸ್ಕ್ರತಿಯ ಲಕ್ಷಣ. ಸನ್ನಿವೇಶ, ವಾಯುಗುಣ, ಸಸ್ಯವರ್ಗ, ಮಿಗಿಲಾಗಿ ಜನತೆಯ ಆಶೋತ್ತರಗಳು-ಇವೆಲ್ಲವೂ ಸಂಸ್ಕøತಿಯ ಬೆಳೆವಣಿಗೆಗೆ ಬಹುಮಟ್ಟಿಗೆ ಸಹಾಯಕವಾಗಿವೆ. ಹುಟ್ಟು, ಬೆಳೆವಣಿಗೆ, ವಿನಾಶ ಮೊದಲಾದ ಪ್ರಭೇದಗಳಿಗೆ ಸಂಸ್ಕøತಿಯೂ ಹೊರತಲ್ಲವೆಂದು ಖಾಲ್ದೂನನ ಖಚಿತ ನಂಬಿಕೆ. ಅರಬ್ಬೀ ಇತಿಹಾಸಕಾರರಲ್ಲಿ ಅಗ್ರಗಣ್ಯನೆಂದು ಮರ್ಯಾದಿತನಾಗಿರುವ ಈತನನ್ನು ಕೆಲವರು ಇತಿಹಾಸಶಾಸ್ತ್ರದ ಪಿತಾಮಹನಾದ ಗ್ರೀಸ್ ದೇಶದ ಥ್ಯೂಸಿಡಿಡಿಸನಿಗೂ ಪ್ರಖ್ಯಾತ ರೋಮನ್ ಇತಿಹಾಸಜ್ಞನಾದ ಟಾಸಿಟಸ್‍ಗೂ ಹೋಲಿಸಿದ್ದಾರೆ. ಆರ್ನಲ್ಡ್ ಟಾಯ್ನಬಿಯವರು ಇವನನ್ನು ಜಗತ್ತಿನಲ್ಲಿ ಆಗಿಹೋದ ಹಾಸ್ಯಶಾಸ್ತ್ರತತ್ತ್ವಜ್ಞರಲ್ಲಿ ಅತ್ಯಂತ ಶ್ರೇಷ್ಠನೆಂದು ಪ್ರಶಂಸಿಸಿದ್ದಾರೆ.	
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ